Thursday, March 16, 2023

ಕವಿಗೆ ಕವಿ ಮಣಿವನ್‌-೭: ಸದಾನಂದ ಸಂಸ್ಕೃತಿ


 

ಕವಿಗೆ ಕವಿ ಮಣಿವನ್ ೮: ರಾಮಾನುಜನ್ ಕವಿತೆ ಓದಿ



ಕುವೆಂಪು ಹಾಗೆ ಮಾತಾಡಬೇಕಾದರೆ

ತನ್ನ ಘನತೆಯಲ್ಲೇ ಅಪಾರ ನಂಬಿಕೆ ಬೇಕು.


ಬೇಂದ್ರೆಯಂತೆ ಹಾಡಬೇಕಾದರೆ

ಪರವಶನ ಆವೇಶ, ಧ್ಯಾನದ ತಂಪು ದರ್ಶನ ಕೂಡಿರಬೇಕು.


ಬಿರುನುಡಿ ಬೇಡುವುದನ್ನೂ ಮೆಲುನುಡಿಯಲ್ಲಿ 

ನರಸಿಂಹ ಸ್ವಾಮಿಗಳಂತೆ ಒಪ್ಪಿಸುವುದಕ್ಕೆ

ಬಾಸುಮತಿ ಅನ್ನ, ತಿಳಿಸಾರು, ಶಾವಿಗೆ ಖೀರು

ಬಣ್ಣಕಟ್ಟಿದ ಅಡಿಕೆ, ಚಿಗುರೆಲೆಗಳಲ್ಲಿ

ಅವು ದುರ್ಲಭವಾದ ಕಾಲದಲ್ಲೂ

ರುಚಿ ಉಳಿದಿರಬೇಕು,

ಬಾಡಿಗೆ ಮನೆಯ ತಾಪತ್ರಯಗಳು ಹೇಗೂ ಇರುತ್ತವೆ ಎಂದು ತಿಳಿದು 

ಪಬ್ಲಿಕ್ ಪಾರ್ಕಿನಲ್ಲಿ ಇನಿಯಳ ಜೊತೆ ಅಲೆದಾಡಿ ಬರಬೇಕು.


ಸದಾಚಾರದ ನಡುಮನೆಯಲ್ಲೇ ಮೋಕ್ಷವೂ ಇದೆ

ಎಂಬ ನಂಬಿಕೆ ಬೇಕು, ಪೂರ್ವಜರಿಂದ ಕೇಳಿಪಡೆದ ಈ ಶ್ರದ್ದೆ 

ತನಗೆ ನಿಜವಾಗುವುದಕ್ಕೆ ಬೇಕಾದಷ್ಟು ಕಾಲ

ಆದರದ ಸ್ವಂತ ಮನೆಯಲ್ಲಿ ಮಾಗಬೇಕು, ಹೀಗೆ ಹುಳಿಕಳೆದು ಮಧುರವಾಗಲು 

ಸಾವು ನೋವಿನ ಜೊತೆಗೆ ಮರಿಮಕ್ಕಳನ್ನು ಕಾಣಬೇಕು, ಅದಕ್ಕೆ ತ್ರಾಣಬೇಕು, 

ಬಹಳ, ಬಹಳ ಕಾಯಬೇಕು, ಮಾಸ್ತಿಯಂತೆ ನಿವೇದಿಸುವುದಕ್ಕೆ.


ಕಗ್ಗಂಟು ತೊಡೆಯಾದ ಭಾವ, ಆದರೆ ಉದ್ರೇಕ,

ಹುಬ್ಬು ಗಂಟಾದ ಬುದ್ದಿ, ಆದರೆ ಶ್ರದ್ಧೆ,

ಮಿತಿಗಳನ್ನು ಮೀರುವ ಆಸೆ, ಆದರೆ ಮಿತಿಯಲ್ಲಿರುವ ವ್ರತ,

ಒಳಗಿನ ತಳಮಳಕ್ಕೆ ಸಮುದ್ರದ ಭಾಷೆ ಕೃತಕವೆನ್ನಿಸದಂತೆ 

ಸಹಜವಾಗಿ ಸಿಗಬೇಕು, ಆಡಿದ್ದು ಆಗಬೇಕು,

ಅಡಿಗರಂತೆ ತುಡಿಯುವುದಕ್ಕೆ, ಕರಗದಂತೆ ನುಡಿಯುವುದಕ್ಕೆ.


ಹಿತವಾದ ಆಚಾರವಂತಿಕೆ, ಮೃದುವಾದ ಧ್ಯಾನಶೀಲತೆ 

ಅನುರಾಗದಲ್ಲಿ ನಂಬಿಕೆ, ಭಗವಂತನಲ್ಲಿ ಅರ್ಪಣಭಾವ 

ಬೇಕು, ಪುತಿನರ ಬಹುಶ್ರುತತ್ವದ ಭಕ್ತಿಗೆ.


ಆದರೆ ನಿಮ್ಮಂತೆ ಬರೆಯುವುದಕ್ಕೆ, ರಾಮಾನುಜನ್ 

ದೊಡ್ಡ ದನಿಯಲ್ಲಿ ಮಾತಾಡಲು ನಾಚಬೇಕು; 

ಆದರೆ ನಾಚದಂತೆ

ಹಾಗೆ ಮಾತಾಡಬಲ್ಲವರಲ್ಲಿ ಗೌರವ ಬೇಕು. 

ಪೋಲಿ ಹುಡುಗರು ಬೀದಿಯಲ್ಲಿ ಕಲಿಸಿದ ಭಾಷೆಯಲ್ಲಿ 

ಮಾತಾಡುವ ಲವಲವಿಕೆ ಬೇಕು;

ಮಾನ ಮರ್ಯಾದೆ ಬಿಟ್ಟ ಈ ಲವಲವಿಕೆಯಲ್ಲಿ 

ನಾಚುವ ಸತ್ಯ ಪಿಸುಗುಡುವ ಹುಂಬತನವಿರಬೇಕು; 

ತಲೆ ನೆರೆತ ಮೇಲೂ ಹುಡುಗಾಟಿಕೆ ಉಳಿದಿರಬೇಕು; 

-ಇಷ್ಟಕ್ಕೂ ಅದನ್ನು ಉಳಿಸಬಲ್ಲ ಗೆಳೆಯರೋ ಪ್ರೇಯಸಿಯರೋ

ಸದಾ ಇರಬೇಕು.


ಪ್ರಬುದ್ಧತೆ, ಹಸಿತನ, ಮಾತುಹಾರಿಸುವ ಕಿಲಾಡಿತನ 

ಕೋಡಂಗಿ ವೇಷದಲ್ಲಿ ಆವೇಶ ಮರೆಸುವ ಜಾಣತನ 

ಪ್ರೀತಿಗಾಗಿ, ಸೌಜನ್ಯಕ್ಕಾಗಿ, ಆರೋಗ್ಯಕ್ಕಾಗಿಯೂ 

ಹಲ್ಕ ಆಗಿಯೇ ಉಳಿದಿರುವ ಖದೀಮತನ 

ಬೇಕು-ನಿಮಗೆ ನಿಮ್ಮಂತೆ ಇದ್ದೇ ಬರೆಯುವುದಕ್ಕೆ.


ಶ್ರಮಪಟ್ಟು ಕಲಿತ ಇವೆಲ್ಲವೂ ಸಹಜವೆನ್ನಿಸುವಂತೆ 

ಘನತೆಯಿಲ್ಲದೆ ಘನವಾಗುವಂತೆ

ನಿಮ್ಮಂತೆ ಬರೆಯಲು, ರಾಮಾನುಜನ್

ಹಿತವಾಗಿ ನೋಯುವುದನ್ನೂ, ಅದರ ಆರ್ದ್ರತೆ ಉಳಿಸಿಕೊಂಡಿರುವುದನ್ನೂ

ಸತತ ಅಧ್ಯಯನದಲ್ಲಿ ಕಲಿತಿರಬೇಕು.


ಕಳ್ಳ ಕೊರಮ ಎನ್ನಿಸದಂತೆ

ಕೊರೆಯದಂತೆ

ಮಿರುಗಾಗಲೀ ಬುರುಗಾಗಲೀ ಇಲ್ಲದಂತೆ

ಸದ್ಯ ಎನ್ನಿಸುವಂತೆ

ಬರೆಯಲು ಕಲಿಸಿ, ಅಷ್ಟೇ ಸಾಕೆಂಬ ತೃಪ್ತಿ ಹುಟ್ಟಿ 

ಕ್ಷಿಪ್ರ ಸುಖದ ಹಲವರ ಅನಾಮಧೇಯ ಕಾವ್ಯಕ್ಕೂ 

ನೀವು ಕಾರಣವಾಗಿ ಬಿಟ್ಟಿರಿ, ಗುರುಗಳೆ 

ಛೇ, ಅದು ನಿಮ್ಮ ತಪ್ಪೆಂದು ಹೇಳಿದ್ದಲ್ಲ.


ನಿತ್ಯದ ಹೆಂಡತಿಯನ್ನು ನಿತ್ಯದಂತೆ ಪ್ರೀತಿಸುವಾಗ 

ಅವಸರ, ಆತಂಕ, ತೀವ್ರತೆ ಇಲ್ಲದ್ದರಿಂದಲೇ 

ಅರೆ ಬೆತ್ತಲೆಯಲ್ಲೂ

ಯಾವುದೋ ಅನಿರೀಕ್ಷಿತ ಕ್ಷಣ, ಅಪ್ರಯತ್ನವಾಗಿ 

ಅವನಿಗೆ ಇವಳು, ಇವಳಿಗೆ ಅವನು

ಒದಗಿ ಬಿಡುವ ಸೋಜಿಗದ ಸುಖದಂತೆ

ಇಡೀ ಪದ್ಯದ ಸುರತ ಪೂರ್ವ ಮುದ್ದಾಟದಲ್ಲಿ ಹಠಾತ್ತನೆ ಒದಗಿಬರುವ 

ನಿಮ್ಮ ತಿರುವುಗಳು;

ಅದೃಷ್ಟವಶಾತ್ ಎಂಬಂತೆ ನಿಮಗೆ

ಪತ್ತೆಯಾಗಿ ಬಿಡುವ ಮೈ ಮನಸ್ಸುಗಳ

ಸಂದಿ ಮೂಲೆಗಳು.


ಆದರೆ ನಿಮ್ಮಂತೆ ಸರಳವಾಗಿ ಸಹಜವಾಗಿ ಸತ್ಯವಾಗಿ

ನಾವು ಬರೆಯಬೇಕೆಂದರೆ ಗುರು

ನಿಮ್ಮಂತೆ ಬರೆಯಬಾರದು,

ಇರಬೇಕು.



ಯು.ಆರ್. ಅನಂತಮೂರ್ತಿ ಅವರು ಏ.ಕೆ. ರಾಮಾನುಜನ್‌ ಕುರಿತು ೧೫.೧.೯೨ರಂದು ರಚಿಸಿದ ಕವಿತೆ. ಅನಂತಮೂರ್ತಿ ಅವರ ಸಮಗ್ರ ಕವಿತೆಗಳ ಸಂಕಲನದಲ್ಲಿದೆ.




Tuesday, March 14, 2023

ಕವಿಗೆ ಕವಿ ಮಣಿವನ್‌ ೬: ಗಳಗನಾಥರಿಗೆ


 


ಕನ್ನಡದ ನುಡಿವೆಣ್ಣು ಕಬ್ಬದುಡಿಗೆಯ ತೊಟ್ಟು 

ಗಂಭೀರ ಗಮನದಲ್ಲಿ ಪಂಡಿತರ ಕೋಲೂರಿ 

ರಾಜವೈಖರಿಯಲ್ಲಿ ಮಂದ ಹೆಜ್ಜೆಗಳಿಟ್ಟು 

ಪಾಮರರ ಕಡೆಗಣಿಸಿ ಆಕಾಶಕುಸುಮಗಳ 

ಕಂಪನಾಘ್ರಾಣಿಸುತ ಕಲ್ಪವೃಕ್ಷದ ಹಣ್ಣ 

ಸವಿಸೊದೆಯ ಸೊಗಕೆಂದು ಬಾಯಿಚಪ್ಪರಿಸುತ್ತ 

ಸಗ್ಗಗಭಿಮುಖವಾಗಿ ಪಯಣ ಹೊರಟಿರುವಾಗ 

ಆಕೆಯನೆ ಕೆಣಕಿದಿರಿ ಗಳಗನಾಥರೆ ! ನೀವು.


ಉಭಯಭಾಷಾ ಪ್ರೌಢಸಾಮ್ರಾಜ್ಞತಾನಿಂದು

ರನ್ನ ಪೀಠವ ತೊರೆದು ಸಾಮಾನ್ಯರೆದೆಯಲ್ಲಿ 

ಸಲೆ ಮೆರೆದು ನಿಂತಿಹುದ ನಿಚ್ಚಳದಿ ಕಂಡಾಗ 

ನಿಮ್ಮ ಸೇವೆಯ ಮರೆದು ಬಾಳುವನೆ ಕನ್ನಡಿಗ? 

ನಿಮ್ಮ ಗದ್ಯದ ಶೈಲಿ ಕನ್ನಡದ ಜನಕಿತ್ತ 

ದಿವ್ಯ ಕಾಣಿಕೆಯಾಯ್ತು; ಹೆಸರು ಶಾಸನವಾಯ್ತು.



ಕನ್ನಡ ಕಾದಂಬರಿ ಪಿತಾಮಹ ಗಳಗನಾಥ (ವೆಂಕಟೇಶ ತಿರಕೋಕುಲಕರ್ಣಿ) ಅವರನ್ನು ಕುರಿತು ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ ಅವರು 1946ರ ಮಾರ್ಚ್‌ 15ರಂದು ಬರೆದಿದ್ದ ಕವಿತೆ ’ಗಳಗನಾಥರಿಗೆ’. ಈ ಕವಿತೆಯು ಧಾರವಾಡದ ವಿದ್ಯಾವರ್ಧಕ ಸಂಘವು ಪ್ರಕಟಿಸಿದ್ದ (1945) ’ಗಳಗನಾಥ’ ಪುಸ್ತಕದಲ್ಲಿ ಪ್ರಕಟವಾಗಿದೆ.


Monday, March 13, 2023

ಕವಿಗೆ ಕವಿ ಮಣಿವನ್‌-೫: ಡೆಡಲಸ್ಸಿನ ಸ್ವಗತ


 ಡೆಡಲಸ್ಸಿನ ಸ್ವಗತ

(ನಾಗರಾಜನ ನೆನಪಿಗೆ)


ಬ್ರಹ್ಮಾಂಡದಷ್ಟನ್ನು ಒಮ್ಮೆಗೇ ಬಾಚಿ 


ಹಿಡಿಯುವ ತೆವಲು ಹೆಮ್ಮರವಾಗಿ 

ನೂರು ನೂರಾರು ಕೊಂಬೆಗಳ ಚಾಚಿ

ಆಕಾಶದ ಮುಖಕ್ಕೆ ಹತ್ತು ಕಡೆ ಮುತ್ತಿಟ್ಟ ಹಾಗೆ. 

ಕತ್ತೆತ್ತಿ ನೋಡಿದರೆ ಮರದ ತುತ್ತತುದಿಗೆ 

ಕೂತಿರುವ ಆ ಹಕ್ಕಿ - ಯಾವುದದು ? 

ರಣಹದ್ದೆ? ಗರುಡನೆ? ಇಲ್ಲ,

ಅಲ್ಲೋಲಕಲ್ಲೋಲವಿರದ ಆಕಾಶದ ಜಲ ಕರೆದದ್ದಕ್ಕೆ

ಪರವಶವಾಗಿ ಕಡಲ ಸೀಳಿ ಮೇಲೆದ್ದು

ಹಾರಿ ಮರದ ತುದಿ ಹಿಡದ ಕೋಳಿಯೇ ? ಇದ್ದರೂ ಇರಬಹುದು. 

ಮುಸ್ಸಂಜೆ ಮಂಜಲ್ಲಿ ಸಂಜೆಗಣ್ಣಿನ ನನಗೆ

ಯಾವುದೂ ಸ್ಪಷ್ಟವಿಲ್ಲ.


ಎಡಕ್ಕೆ ಬಲಕ್ಕೆ ಕೆಳಕ್ಕೆ ಮೇಲಕ್ಕೆ ಕತ್ತ

ಹೊರಳಿಸುವ ಹಕ್ಕಿ, ಮರಕ್ಕೊರಗಿ ಕೂತ

ನನ್ನ ಸುತ್ತಲೂ ಮೊಲ ಕಬಳಿಸಿದೊಂದು ಹೆಬ್ಬಾವಿನ ಹಾಗೆ, 

ಅಥವಾ, ಒಂದು ಬಿಲದಲ್ಲಿ ಹೆಡೆ ತುರುಕಿ

ಇನ್ನೊಂದರಲ್ಲಿ ಬಾಲ ಮುಚ್ಚಿಟ್ಟು, ಮೈ ಮುರಿದು

ಮಿರಮಿರನೆ ಮಿರುಗಿದೊಂದು ನಾಗರದ ಹಾಗೆ

ನೂರಾರು ಬೇರುಗಳ ಜಾಲ.


ನಿಧನಿಧಾನ ಕತ್ತಲ ಪರದೆ ನೆಲಕ್ಕಿಳಿದು

ಚಾಪೆ ಬಿಚ್ಚಿದ ಹಾಗೆ ಕ್ಷೀರಪಥ ಹೊಳೆದು

ಆಕಾಶದಲ್ಲಿ ಚಿಕ್ಕೆಗಳ ಮೇಳ.

ಅಮೃತ ತುಂಬಿದೊಂದು ಕುಂಭದ ಕನಸಿಗಾಗ ರಹದಾರಿ

ಸಿಕ್ಕಂತೆ. ರಾತ್ರಿಯುದ್ದಕ್ಕು ಹಕ್ಕಿ ರೆಕ್ಕೆಗಳ ಬಡಿದು

ನನ್ನತ್ತ ತೇಲಿ ಬಳುಕುತ್ತ ಬರುವ ಗರಿ,

ಜೊತೆಗೆ ಸದ್ದು.


ನನ್ನಾಳದ ಕನಸು ಕಡೆದ ಕಡೆಯ ಮಗನಾಗಿ,

ಮನೆಯವನಾದೆ, ಮಿಂಚಿದೆ.

ಹುಟ್ಟುವಾಗಲೇ ಪಡಕೊಂಡು ತಂದ ವರ, ನಿನ್ನ ಆ ಪ್ರತಿಭೆ,

ಬಾಳಿನುದ್ದಕ್ಕು ಹರಸದೇಹೋಗಿ, ತಿರುಗಿ

ಬಂದೊಂದು ಬಾಣದ ಹಾಗೆ ಅಥವಾ ಶಾಪದ ಹಾಗೆ ಬಡಿಯಿತು.

ಮೇಣ ಮೆತ್ತಿ ನಾ ಕಟ್ಟಿ ಕೊಟ್ಟ ರೆಕ್ಕೆಗಳನುಟ್ಟು

ಅರೆದಾರಿವರೆಗೆ ನನ್ನ ಸಂಗಾತಿಯಾಗಿ

ಪಕ್ಕ ಹಾರುತ್ತಿದ್ದು ಫಕ್ಕನೆ

ಗತಿ ಬದಲಿಸಿ ಮರೆಯಾದ ಮುಕ್ಕನೇ,

ವಿನಯದ ಬನಿ ಇರದ ವಿದ್ವತ್ತು

ವಿವೇಕವಾಗದೆನ್ನುವ ನನ್ನ ಈ ಲೋಕ ಕಲಿಸಿದ ಮಾತು

ಕಿವಿಗೆ ಬೀಳುವ ಮೊದಲೆ

ಹೂಂಕರಿಸಿ ದೂರ ಹಾರಿದ ಖಗನೆ,

ಅಹಂಕಾರವೇ ಮೈಯುಟ್ಟಂತೆ ಮೆರೆದ ಮಗನೆ, 

ಕಾಣದ ದೇವರಿಗಿರಲಿ, ಕೆಂಡದುಂಡೆಯ ಹಾಗೆ 

ಕಂಡು ಉರಿದುರಿಯುವ ರವಿಗೆ

ಸವಾಲೆಸೆದು ರೆಕ್ಕೆ ಸುಟ್ಟು ಕಡಲ ನೀರಿಗೆ ಬಿದ್ದು 

ನೀರ ಪಾಲಿಗೆ ಹತ್ತಾರು ಗರಿಗಳ ಬಿಟ್ಟು 

ತಳದಲ್ಲಿ ಮಲಗಿದ ನನ್ನ ಕರುಳ ಕುಡಿಯೆ,

ನಿನ್ನವರ ನಿರ್ವ್ಯಾಜ ಸ್ನೇಹಕ್ಕೆ ನಿನ್ನ ಬೆಳಕಿನ ದಾಹಕ್ಕೆ,

ಕೊನೆಗೆ ನಿನಗೆ ನೀನೇ ದ್ರೋಹ ಬಗೆದು ಮರೆಯಾದ ಕಿಡಿಯೆ, 

ಹೇಳು, ಹೇಳು, ನೀ ಸತ್ತು,

ಪರಮಾರ್ಥವಿರಲಿ, ಬಿಡುವಿರದ ಹಾಗೆ ಲಗ್ಗೆ

ಹಾಕುವ ಇವೊತ್ತಿನ ಇಹದ ಒಳಗುಟ್ಟು

ಬಯಲಾಯಿತೇ ?

ದಾರಿಯ ಕೊನೆಗೆ ಕಿಂಚಿತ್ತಾದರೂ ಬೆಳಕು ಹೊಳೆಹೊಳೆಯಿತೇ?


2

ಹೊತ್ತಲ್ಲದ ಹೊತ್ತಲ್ಲಿ ಸತ್ತು

ಇತಿಹಾಸವಾದವನೆ, ನಾರ್ಸಿಸಸನೇ, 

ಒತ್ತೊತ್ತಿ ಬರುವ ನೆನಪು-ಬೂಟಿನ ಕೆಳಗೆ 

ನಿನ್ನ ಕನಸು ನಲುಗಿ ನುಜ್ಜಾಗುವ ಗಳಿಗೆ

ಬರುವ ಮೊದಲೇ ಹಿಂಜೋಲ ಬಿಟ್ಟು ಕರಗಿ ಹೋದವನೆ, 

ಇಕರಸನೆ, ಮಗನೇ...

ನೀನಿದ್ದದ್ದನ್ನು, ಹಾಗೇ ನೀನು ಸತ್ತು ಹೋದದ್ದನ್ನು, ಮರೆತು 

ಯಾವೊತ್ತಿನ ಹಾಗೆ ಇವೊತ್ತಿಗೂ ಪರಿಭ್ರಮಿಸುವುದು ಜಗತ್ತು- 

ಅದೋ, ಅಲ್ಲಿ, ಗಿಡಕ್ಕೆ ಕಟ್ಟಿದ ಕುದುರೆ ತೊಗಟಿಗೆ 

ತನ್ನ ಅಂಡುಜ್ಜಿ ಕೆನೆಯುವುದು. ಕಡಲ ಹಿನ್ನೀರ ಮಗ್ಗುಲಿಗೆ 

ಎಂದಿನ ಹಾಗೆ ಮಕ್ಕಳ ಕೇಕೆ.

ನೀರಿಗೆ ಬಿದ್ದ ನಿನ್ನ ಚೀತ್ಕಾರದ ಸದ್ದು 

ಕೇಳಿಯೂ ಕೇಳದ ಹಾಗೆ ತನ್ನ ಹೊಲವನ್ನುತ್ತು 

ಬೆವರನೊರೆಸಿಕೊಳ್ಳುವ ಅಳು.

ಒಬ್ಬೊಬ್ಬರಿಗು ಅವರದೇ ಆದ ಜರೂರು. 

ಅದೇ ರೀತಿ ನನಗೂ.


ಕೀಲುಕೊಟ್ಟಾಗ ಪ್ರಾಣ ಸಂಚಾರವಾಗುವ ಹಾಗೆ

ಮುಲುಗಾಡುವ ಮರದ ಆಟಿಕೆ ಮಾಡಿ,

ಅಥವಾ, ಕಾಗದದ ಚಿಟ್ಟೆ ಹಾರಾಡುವ ಹಾಗೆ ರೆಕ್ಕೆಗಳ ಹೂಡಿ

ದೊರೆಮಕ್ಕಳಿಗೆ ಕೊಟ್ಟು, ಅವರ ಜೊತೆಗಾಡಿ

ಹೊಟ್ಟೆ ಹೊರೆಯುವ ನಾನಿಲ್ಲಿ, ಈಗ.

ಆಗಾಗ, ನನ್ನ ಸುತ್ತಣ ಮಂಜ ಸೀಳಿ ಧುತ್ತನವತರಿಸಿ ಬಂದು 

ಕೈಗೆಟುಕುವಂತೆ ನಿಂತು

ಒಗಟು ಮಾತಾಡಿ

ಕಾಡುವ ಮಗನೇ,


ಹೇಳು, ಅಳಿದವನ ಮಾತು

ಉಳಿದವನ ಕರುಳಲ್ಲಿ ಅರಳುವುದು

ಹೀಗೆತಾನೇ ?



ಟಿಪ್ಪಣಿ: ೧. ತಂದೆ ಡೆಡಲಸ್‌ ಮಗ ಇಕ್ಕರಸ್ಸಿಗೆ ಮೇಣದ ರೆಕ್ಕೆ ಮಾಡಿಕೊಟ್ಟು ಎಚ್ಚರ ಹೇಳಿದ. ಅದನ್ನು ಉಲ್ಲಂಘಿಸಿದ ಹುಡುಗ ದುರಂತಕ್ಕೊಳಗಾದ. - ಗ್ರೀಕ್ ಪುರಾಣದಿಂದ.

೨. ೬೧-೬೬ ಸಾಲುಗಳು : ಆಡನ್ನಿನ Musee des Beaux Arts ಎನ್ನುವ ಕವನವನ್ನು ನೆನಪಿಗೆ

ತರುವಂತೆ.


ಡಿ.ಆರ್‌. ನಾಗರಾಜ ಕುರಿತು ಬಿ.ಸಿ. ರಾಮಚಂದ್ರ ಶರ್ಮ ರಚಿಸಿದ ಕವಿತೆ. ಈ ಕವಿತೆಯು ’ಕವಿ ಕಂಡ ಕವಿ’ ಸಂಕಲನದಲ್ಲಿ ಪ್ರಕಟವಾಗಿದೆ.

Friday, March 10, 2023

ಕವಿಗೆ ಕವಿ ಮಣಿವನ್-೪ ಎನ್ ಎಸ್ ಎಲ್ ಅವರಿಗೆ

 




ಆಶ್ಚರ್‍ಯಕರ ವ್ಯಕ್ತಿ ನೀವು ಯಾವಾಗಲೂ 

ಆಕರ್ಷಿಸುತ್ತೀರಿ ಎಲ್ಲರನ್ನೂ.

ಒಂದಕ್ಕೊಂದು ಹೊಂದದ್ದು ಒಟ್ಟಿಗಿವೆ ನಿಮ್ಮಲ್ಲಿ 

ಕೈ ಕುಲುಕಿ ಬಿಗಿದಪ್ಪಿ ಸ್ನೇಹದಲ್ಲಿ,

ಇರುವಂತ ಕೆಲವರು ಉದಾತ್ತರಲ್ಲಿ


ದಲಿತ ಹುಡುಗನ ಕಥೆಯ ಕೇಳುತ್ತ ಕೇಳುತ್ತ

ಕಣ್ಣೀರುಗರೆದ ಬ್ರಾಹ್ಮಣರು ನೀವು;

ನಿಜವಾದ ಬ್ರಾಹ್ಮಣ, ವಿದ್ಯೆ ಅನುಕಂಪದಲ್ಲಿ

ಥೇಟು ವಿಶ್ವಾಮಿತ್ರ ಛಲದಲ್ಲಿ!


ಏನೊ ಆಪತ್ತಿನಲ್ಲಿ ಚೀರಿದ್ದೆ, ಬಳಿಬಂದು 

'ನಾನಿರುವೆ ಅಣ್ಣ ಎಂದವರು;

ನಿನ್ನ ಮುಟ್ಟಿದ ಮೇಲೆ ದೇವರನ್ನು ಮುಟ್ಟುವ

ಅಧಿಕಾರ ಬಂತೊ ಎಂದವರು.


ನನ್ನ ಹೆಗಲಲ್ಲಿ ನೀವು ಕೈಯಿಟ್ಟು ನಿಂತಾಗ

ಬೆಚ್ಚಗಾಯಿತು ಏಕೊ ಒಳಗೆ,

ಅಣ್ಣ ಕಡೆಗೂ ತನ್ನ ತಮ್ಮನ ಗುರುತು ಹಿಡಿದು

ಪ್ರೀತಿಯಲ್ಲಿ ಬಂದಂತೆ ಬಳಿಗೆ


ಕುರ್ಚಿಯಲ್ಲಿ ಕೂತರೂ ಕತ್ತು ಸೆಟೆಯುತ್ತದೆ

ಕಂಡಿರುವೆ ಎಷ್ಟೋ ಜನರನ್ನು

ನಿಮ್ಮ ಥರವೇ ಬೇರೆ, ಆತ್ಮಗೌರವಕ್ಕಾಗಿ

ಮೂಲೆಗೊದ್ದಿರಿ ಕುರ್ಚಿಯನ್ನು


ಶಿಶುವಿನಾಳ ಶರೀಫರನ್ನು ಮನೆ ಮನೆ ಮೆರೆಸಿ

ಭಾವೈಕ್ಯದಾಕೃತಿಯ ಕಡೆದಿರಿ;

ಶ್ರೀ ಶರೀಫಭಟ್ಟ ನಮ್ಮ ಗುರು ಎಂದು

ನಮ್ಮೆದೆ ಉಬ್ಬುವಂತೆ ಬಾಳಿದಿರಿ


ಹೊರಗೆ ಹೆಬ್ಬುಲಿ, ಒಳಗೆ ಮಿದುಮೈಯ ಪುಟ್ಟಮೊಲ

ಕರಟದೊಳಗಿರುವ ತಿರುಳಂತೆ !

ಯಾರಿದ್ದಾರೆ ಬೇರೆ, ಮೆಚ್ಚಾಗಿ ಶಿಷ್ಯರಿಗೆ

ಪರಮಗುರು ನಯಶೀಲರಂತೆ ?


ಡಾ. ಸಿದ್ಧಲಿಂಗಯ್ಯ ಅವರು ಎನ್‌.ಎಸ್‌. ಲಕ್ಷ್ಮೀನಾರಾಯಣಭಟ್ಟ ಅವರನ್ನ ಕುರಿತು ಬರೆದ ಕವಿತೆ. ಎನ್‌ಎಸ್‌ಎಲ್‌ ಅವರ ಅಭಿನಂದನ ಗ್ರಂಥ ’ನೀಲಾಂಜನ’ (1996)ದಲ್ಲಿ ಪ್ರಕಟವಾಗಿದೆ.


Wednesday, March 8, 2023

ಕವಿಗೆ ಕವಿ ಮಣಿವನ್‌-೨: ಶ್ರೀಕೃಷ್ಣ ಸ್ಮರಣೆ



 ಶ್ರೀಕೃಷ್ಣ ಸ್ಮರಣೆ

1


ಬೇಳೆ ಹುಳಿ ವಾಸನೆಯ ಹುಡುಗಿಯರ 


ಮನ ಕೆಡಿಸಿ ಮತ್ಸಗಂಧಿಯರ ಮಾಡ 


ಬಯಸಿದ ಬೆವರ ವಾಸನೆಯ ಹುಡುಗ 


ಕೊನೆಗೆ ಮಣ್ಣಲ್ಲಿ ಒಂದಾಗಿ


ನಿನ್ನ ಗೋರಿಯ ಮೇಲೆ ಸಸಿ ಹುಟ್ಟಿ 


ಅವರ ತುರುಬಿಗೆ ಹೂವಾದವು



ಹೂವ ಸುಗಂಧವೇ ಬೇರೆ.


2


ವರ್ಣಗಳಲ್ಲಿ ಭೇದ ಕಂಡು ಕನಲಿದ ಹುಡುಗ 


ಎಲ್ಲ ಬಣ್ಣಗಳ ಕಲಸಿ ಒಂದು ಮಾಡುವೆನೆಂದ 


ಕಪ್ಪು ಕತ್ತಲೆ ಸೀಳಿ ಬೆಳಕು ಮೂಡುವ ಮೊದಲು


ಕಾಡು ಹಾದಿ ತಿಳಿಯದೆ ಬಳಲಿದ


ಕಂದು ಬಣ್ಣದ ಕುದುರೆ ಏರಿ ಮಾಯವಾದ



ಖುರ ಪುಟದ ಪ್ರತಿಧ್ವನಿ ಮಾತ್ರ ಸ್ಪಷ್ಟ.


3


ಹೊತ್ತು ಮುಳುಗಿದ ಮೇಲೆ


ಕಾಡಿನ ಗೀಜಗನ ಗೂಡಲ್ಲಿ


ಕೊಳಲುಲಿತ


ಕಣ್ಮರೆಯಾದ ಕೃಷ್ಣನ ಶೇಷ.


4


ಭಾಗವತರಿಗೆ ಪ್ರೀತಿ ಬಾಲಕೃಷ್ಣನ ಲೀಲೆ


ಗೋಕುಲದ ಹುಡುಗಿಯರ ಕಣ್ಣು ಸುಂದರಾಂಗನ ಮೇಲೆ


ಆಸಕ್ತರಿಗೆ ಗೀತೋಪದೇಶದ ಮಾಲೆ


ಸಾವು ಕರೆದಾಗ ಬಿಟ್ಟು ಹೊರಟವನ ಕಂಡು


ಎಲ್ಲರೆದೆಯಲ್ಲಿ ಮರುಕದ ಜಲಧಾರೆ.



ಆಲನಹಳ್ಳಿ ಕೃಷ್ಣ ಕುರಿತು ಪ್ರತಿಭಾ ನಂದಕುಮಾರ್‌ ಅವರು ರಚಿಸಿದ ಕವಿತೆ. ಇದು ಡಿ.ಎಸ್‌. ನಾಗಭೂಷಣ ಮತ್ತು ರಾಘವೇಂದ್ರ ಪಾಟೀಲ ಸಂಪಾದಿಸಿದ ’ಕಾಡಿನ ಹುಡುಗ ಕೃಷ್ಣ’ (1990) ಸಂಸ್ಮರಣ ಸಂಪುಟದಲ್ಲಿದೆ.

ಕವಿಗೆ ಕವಿ ಮಣಿವನ್‌-೩ : ತಮ್ಮ ನೆನೆವ


ತಮ್ಮ ನೆನೆವ!



ಕಲ್ಲು-ಕಾಗದ-ಕಡತಗಳಲ್ಲಿ ಕಾಲನ ಕಾಲು

ಸಿಕ್ಕು ತೊಳಲಾಡುವಲಿ ಕುಣಿಕೆ ಬಿಡಿಸಿದಿರಣ್ಣ !

ಕರುವನಾಡಿಸಿದಂತೆ-ಅದನು ಕುಣಿಸಾಡಿದಿರಿ

ತಣಿದಿರಿ, ನೀವು ತಣಿಸಿದಿರಿ ಹನಿಸಿದಕಣ್ಣ.


ವೀರಚಿಂತಕ, ನಿಮ್ಮ ಧ್ಯಾನ ಬುದ್ಧಿಗೆ ಗಮ್ಯ 

ನಿಮಗೆ ನೀವೇ ಪೂರ್ವಪಕ್ಷ, ಅಕ್ಷರ-ರಮ್ಯ. 

ನಡುಹಾದಿಯಲ್ಲಿ ಬಿಡಬಹುದೆ ಜೋಗಿಯಕಂತೆ-? 

ಕನ್ನಡಕೆ ಬರಬಹುದು-ಮತ್ತೆ, ನೀವೂ ಅಂತೆ-


ಪೈಗೆ ಪೈ ಲೆಕ್ಕ ಒಪ್ಪಿಸಿದಿರಾ? ಗೋವಿಂದ

ಒಪ್ಪಿದನೆನಾ ನೆನೆವೆ ಕಸ್ತೂರಿ, ಜವ್ವಾದಿ

ಹೊರಗೆ-ಹೊಗೆ ಬೂದಿ, ಒಳಗೊಳಗೆ ಅಗ್ನಿಯ ಹಾದಿ

ನಿಮ್ಮ ಜಿಜ್ಞಾಸೆಗೆಲ್ಲಿದೆ ಮುಗಿವು? ಪದಕಾದಿ?


ಹರಿಸಿದಿರಿ ತರುಣರನು, ಆ ಅಸೂಯೆಯೆದಗ್ಧ-

ನೀವು ಕಾಲ ಜ್ಞಾನಿ ಮುಗ್ಧ, ಅಕ್ಕರಿಗ, ವಿದಗ್ಧ !



ಗೋವಿಂದ ಪೈ ಅವರನ್ನು ಕುರಿತು ಅಂಬಿಕಾತನಯದತ್ತ ರಚಿಸಿದ ಕವಿತೆ. ಪೈ ಸಂಸ್ಮರಣ ಗ್ರಂಥ ’ದೀವಿಗೆ’ಯಲ್ಲಿ ಪ್ರಕಟವಾಗಿದೆ.

 

ಕವಿಗೆ ಕವಿ ಮಣಿವನ್-೧: ಶ್ರೀ ಕುವೆಂಪುವಿಗೆ


ಶ್ರೀ ಕುವೆಂಪುವಿಗೆ

ಶ್ರೀ ಗುರುವಿನೊಲುಮೆ ತೊಟ್ಟಿಲ ಶಿಶುವೆ, ನೀ ಕುಡಿದು 
ಧರ್ಮಾಮೃತನ ಧನ್ಯನೆನಿಸಿದಯ್‌; ಆ ಮುನ್ನ 
ಮಲೆನಾಡ ತಾಯ ಚೆಲುವೇ ಪೆತ್ತ ಸಿಸುರನ್ನ: 
ಆಗದೇ ವರಕವಿಯ ಜನನ? ಕೊಳಲಂ ಪಿಡಿದು 
ರಾಗರಾಗಗಳಿ೦ದ ಜನತೆಯ ಎದೆಯ ಮಿಡಿದು, 
ಬಣ್ಣ ಬಣ್ಣದ ಗರಿಯ ಸಾವಿರ ಕಣ್ಣ ನವಿಲ- 
ಹೃದಯಪೀಠದ ಸರಸ್ವತಿಯ ಗಾನದ ಗತಿಯ 
ತೂಗಿ ತೋರುವ ನವಿಲ-ಕುಣಿಕುಣಿಸಿದಯ್‌ ತಣಿದು. 
ನೆಲದ ನಲವ ಚೆಲುವ ಮಯೂರನರ್ತನ ಸಾಕೆ 
ವ್ಯೋಮವಿಹಾರಾಕಾಂಕ್ಷಿ ಪಕ್ಷಿರಾಜನಿಗೆ? 
ಅಮೆಬಾವಿಯೆ ಮಾನಸಸರೋವರದ ಸಂಸರಾಜನಿಗೆ? 
ಹಲಮೆಹಾಡಿದರು ಹೊಸತೆನಿಸೆ ರಾಮಾಯಣಕೆ 
ನವದರ್ಶನ ಸ್ಪರ್ಣಸ್ಪರ್ಶನವನಿತ್ತು ಕೃತಿಸಿ 
ನವಭಾರತದ ಕವಿ ಪ್ರವರನಯ್‌-ನಲಿವೆ ನುತಿಸಿ. 

ರಾಷ್ಟ್ರ,ಕವಿ ಕುವೆಂಪು ಅವರನ್ನು ಕುರಿತು ಎಂ.ವಿ. ಸೀತಾರಾಮಯ್ಯ ಅವರು ರಚಿಸಿದ ಕವಿತೆ. ೧೯೫೬ರ ಮೇ ೨೫ರಂದು ರಚಿಸಿದ್ದ ಈ ಕವಿತೆಯು  ಎಂ.ವಿ. ಸೀ. ಅವರ ’ಮುಗಿಯದ ಮಾಯೆ’ ಸಂಕಲನದಲ್ಲಿದೆ.