Friday, March 10, 2023

ಕವಿಗೆ ಕವಿ ಮಣಿವನ್-೪ ಎನ್ ಎಸ್ ಎಲ್ ಅವರಿಗೆ

 




ಆಶ್ಚರ್‍ಯಕರ ವ್ಯಕ್ತಿ ನೀವು ಯಾವಾಗಲೂ 

ಆಕರ್ಷಿಸುತ್ತೀರಿ ಎಲ್ಲರನ್ನೂ.

ಒಂದಕ್ಕೊಂದು ಹೊಂದದ್ದು ಒಟ್ಟಿಗಿವೆ ನಿಮ್ಮಲ್ಲಿ 

ಕೈ ಕುಲುಕಿ ಬಿಗಿದಪ್ಪಿ ಸ್ನೇಹದಲ್ಲಿ,

ಇರುವಂತ ಕೆಲವರು ಉದಾತ್ತರಲ್ಲಿ


ದಲಿತ ಹುಡುಗನ ಕಥೆಯ ಕೇಳುತ್ತ ಕೇಳುತ್ತ

ಕಣ್ಣೀರುಗರೆದ ಬ್ರಾಹ್ಮಣರು ನೀವು;

ನಿಜವಾದ ಬ್ರಾಹ್ಮಣ, ವಿದ್ಯೆ ಅನುಕಂಪದಲ್ಲಿ

ಥೇಟು ವಿಶ್ವಾಮಿತ್ರ ಛಲದಲ್ಲಿ!


ಏನೊ ಆಪತ್ತಿನಲ್ಲಿ ಚೀರಿದ್ದೆ, ಬಳಿಬಂದು 

'ನಾನಿರುವೆ ಅಣ್ಣ ಎಂದವರು;

ನಿನ್ನ ಮುಟ್ಟಿದ ಮೇಲೆ ದೇವರನ್ನು ಮುಟ್ಟುವ

ಅಧಿಕಾರ ಬಂತೊ ಎಂದವರು.


ನನ್ನ ಹೆಗಲಲ್ಲಿ ನೀವು ಕೈಯಿಟ್ಟು ನಿಂತಾಗ

ಬೆಚ್ಚಗಾಯಿತು ಏಕೊ ಒಳಗೆ,

ಅಣ್ಣ ಕಡೆಗೂ ತನ್ನ ತಮ್ಮನ ಗುರುತು ಹಿಡಿದು

ಪ್ರೀತಿಯಲ್ಲಿ ಬಂದಂತೆ ಬಳಿಗೆ


ಕುರ್ಚಿಯಲ್ಲಿ ಕೂತರೂ ಕತ್ತು ಸೆಟೆಯುತ್ತದೆ

ಕಂಡಿರುವೆ ಎಷ್ಟೋ ಜನರನ್ನು

ನಿಮ್ಮ ಥರವೇ ಬೇರೆ, ಆತ್ಮಗೌರವಕ್ಕಾಗಿ

ಮೂಲೆಗೊದ್ದಿರಿ ಕುರ್ಚಿಯನ್ನು


ಶಿಶುವಿನಾಳ ಶರೀಫರನ್ನು ಮನೆ ಮನೆ ಮೆರೆಸಿ

ಭಾವೈಕ್ಯದಾಕೃತಿಯ ಕಡೆದಿರಿ;

ಶ್ರೀ ಶರೀಫಭಟ್ಟ ನಮ್ಮ ಗುರು ಎಂದು

ನಮ್ಮೆದೆ ಉಬ್ಬುವಂತೆ ಬಾಳಿದಿರಿ


ಹೊರಗೆ ಹೆಬ್ಬುಲಿ, ಒಳಗೆ ಮಿದುಮೈಯ ಪುಟ್ಟಮೊಲ

ಕರಟದೊಳಗಿರುವ ತಿರುಳಂತೆ !

ಯಾರಿದ್ದಾರೆ ಬೇರೆ, ಮೆಚ್ಚಾಗಿ ಶಿಷ್ಯರಿಗೆ

ಪರಮಗುರು ನಯಶೀಲರಂತೆ ?


ಡಾ. ಸಿದ್ಧಲಿಂಗಯ್ಯ ಅವರು ಎನ್‌.ಎಸ್‌. ಲಕ್ಷ್ಮೀನಾರಾಯಣಭಟ್ಟ ಅವರನ್ನ ಕುರಿತು ಬರೆದ ಕವಿತೆ. ಎನ್‌ಎಸ್‌ಎಲ್‌ ಅವರ ಅಭಿನಂದನ ಗ್ರಂಥ ’ನೀಲಾಂಜನ’ (1996)ದಲ್ಲಿ ಪ್ರಕಟವಾಗಿದೆ.


No comments: