Monday, March 13, 2023

ಕವಿಗೆ ಕವಿ ಮಣಿವನ್‌-೫: ಡೆಡಲಸ್ಸಿನ ಸ್ವಗತ


 ಡೆಡಲಸ್ಸಿನ ಸ್ವಗತ

(ನಾಗರಾಜನ ನೆನಪಿಗೆ)


ಬ್ರಹ್ಮಾಂಡದಷ್ಟನ್ನು ಒಮ್ಮೆಗೇ ಬಾಚಿ 


ಹಿಡಿಯುವ ತೆವಲು ಹೆಮ್ಮರವಾಗಿ 

ನೂರು ನೂರಾರು ಕೊಂಬೆಗಳ ಚಾಚಿ

ಆಕಾಶದ ಮುಖಕ್ಕೆ ಹತ್ತು ಕಡೆ ಮುತ್ತಿಟ್ಟ ಹಾಗೆ. 

ಕತ್ತೆತ್ತಿ ನೋಡಿದರೆ ಮರದ ತುತ್ತತುದಿಗೆ 

ಕೂತಿರುವ ಆ ಹಕ್ಕಿ - ಯಾವುದದು ? 

ರಣಹದ್ದೆ? ಗರುಡನೆ? ಇಲ್ಲ,

ಅಲ್ಲೋಲಕಲ್ಲೋಲವಿರದ ಆಕಾಶದ ಜಲ ಕರೆದದ್ದಕ್ಕೆ

ಪರವಶವಾಗಿ ಕಡಲ ಸೀಳಿ ಮೇಲೆದ್ದು

ಹಾರಿ ಮರದ ತುದಿ ಹಿಡದ ಕೋಳಿಯೇ ? ಇದ್ದರೂ ಇರಬಹುದು. 

ಮುಸ್ಸಂಜೆ ಮಂಜಲ್ಲಿ ಸಂಜೆಗಣ್ಣಿನ ನನಗೆ

ಯಾವುದೂ ಸ್ಪಷ್ಟವಿಲ್ಲ.


ಎಡಕ್ಕೆ ಬಲಕ್ಕೆ ಕೆಳಕ್ಕೆ ಮೇಲಕ್ಕೆ ಕತ್ತ

ಹೊರಳಿಸುವ ಹಕ್ಕಿ, ಮರಕ್ಕೊರಗಿ ಕೂತ

ನನ್ನ ಸುತ್ತಲೂ ಮೊಲ ಕಬಳಿಸಿದೊಂದು ಹೆಬ್ಬಾವಿನ ಹಾಗೆ, 

ಅಥವಾ, ಒಂದು ಬಿಲದಲ್ಲಿ ಹೆಡೆ ತುರುಕಿ

ಇನ್ನೊಂದರಲ್ಲಿ ಬಾಲ ಮುಚ್ಚಿಟ್ಟು, ಮೈ ಮುರಿದು

ಮಿರಮಿರನೆ ಮಿರುಗಿದೊಂದು ನಾಗರದ ಹಾಗೆ

ನೂರಾರು ಬೇರುಗಳ ಜಾಲ.


ನಿಧನಿಧಾನ ಕತ್ತಲ ಪರದೆ ನೆಲಕ್ಕಿಳಿದು

ಚಾಪೆ ಬಿಚ್ಚಿದ ಹಾಗೆ ಕ್ಷೀರಪಥ ಹೊಳೆದು

ಆಕಾಶದಲ್ಲಿ ಚಿಕ್ಕೆಗಳ ಮೇಳ.

ಅಮೃತ ತುಂಬಿದೊಂದು ಕುಂಭದ ಕನಸಿಗಾಗ ರಹದಾರಿ

ಸಿಕ್ಕಂತೆ. ರಾತ್ರಿಯುದ್ದಕ್ಕು ಹಕ್ಕಿ ರೆಕ್ಕೆಗಳ ಬಡಿದು

ನನ್ನತ್ತ ತೇಲಿ ಬಳುಕುತ್ತ ಬರುವ ಗರಿ,

ಜೊತೆಗೆ ಸದ್ದು.


ನನ್ನಾಳದ ಕನಸು ಕಡೆದ ಕಡೆಯ ಮಗನಾಗಿ,

ಮನೆಯವನಾದೆ, ಮಿಂಚಿದೆ.

ಹುಟ್ಟುವಾಗಲೇ ಪಡಕೊಂಡು ತಂದ ವರ, ನಿನ್ನ ಆ ಪ್ರತಿಭೆ,

ಬಾಳಿನುದ್ದಕ್ಕು ಹರಸದೇಹೋಗಿ, ತಿರುಗಿ

ಬಂದೊಂದು ಬಾಣದ ಹಾಗೆ ಅಥವಾ ಶಾಪದ ಹಾಗೆ ಬಡಿಯಿತು.

ಮೇಣ ಮೆತ್ತಿ ನಾ ಕಟ್ಟಿ ಕೊಟ್ಟ ರೆಕ್ಕೆಗಳನುಟ್ಟು

ಅರೆದಾರಿವರೆಗೆ ನನ್ನ ಸಂಗಾತಿಯಾಗಿ

ಪಕ್ಕ ಹಾರುತ್ತಿದ್ದು ಫಕ್ಕನೆ

ಗತಿ ಬದಲಿಸಿ ಮರೆಯಾದ ಮುಕ್ಕನೇ,

ವಿನಯದ ಬನಿ ಇರದ ವಿದ್ವತ್ತು

ವಿವೇಕವಾಗದೆನ್ನುವ ನನ್ನ ಈ ಲೋಕ ಕಲಿಸಿದ ಮಾತು

ಕಿವಿಗೆ ಬೀಳುವ ಮೊದಲೆ

ಹೂಂಕರಿಸಿ ದೂರ ಹಾರಿದ ಖಗನೆ,

ಅಹಂಕಾರವೇ ಮೈಯುಟ್ಟಂತೆ ಮೆರೆದ ಮಗನೆ, 

ಕಾಣದ ದೇವರಿಗಿರಲಿ, ಕೆಂಡದುಂಡೆಯ ಹಾಗೆ 

ಕಂಡು ಉರಿದುರಿಯುವ ರವಿಗೆ

ಸವಾಲೆಸೆದು ರೆಕ್ಕೆ ಸುಟ್ಟು ಕಡಲ ನೀರಿಗೆ ಬಿದ್ದು 

ನೀರ ಪಾಲಿಗೆ ಹತ್ತಾರು ಗರಿಗಳ ಬಿಟ್ಟು 

ತಳದಲ್ಲಿ ಮಲಗಿದ ನನ್ನ ಕರುಳ ಕುಡಿಯೆ,

ನಿನ್ನವರ ನಿರ್ವ್ಯಾಜ ಸ್ನೇಹಕ್ಕೆ ನಿನ್ನ ಬೆಳಕಿನ ದಾಹಕ್ಕೆ,

ಕೊನೆಗೆ ನಿನಗೆ ನೀನೇ ದ್ರೋಹ ಬಗೆದು ಮರೆಯಾದ ಕಿಡಿಯೆ, 

ಹೇಳು, ಹೇಳು, ನೀ ಸತ್ತು,

ಪರಮಾರ್ಥವಿರಲಿ, ಬಿಡುವಿರದ ಹಾಗೆ ಲಗ್ಗೆ

ಹಾಕುವ ಇವೊತ್ತಿನ ಇಹದ ಒಳಗುಟ್ಟು

ಬಯಲಾಯಿತೇ ?

ದಾರಿಯ ಕೊನೆಗೆ ಕಿಂಚಿತ್ತಾದರೂ ಬೆಳಕು ಹೊಳೆಹೊಳೆಯಿತೇ?


2

ಹೊತ್ತಲ್ಲದ ಹೊತ್ತಲ್ಲಿ ಸತ್ತು

ಇತಿಹಾಸವಾದವನೆ, ನಾರ್ಸಿಸಸನೇ, 

ಒತ್ತೊತ್ತಿ ಬರುವ ನೆನಪು-ಬೂಟಿನ ಕೆಳಗೆ 

ನಿನ್ನ ಕನಸು ನಲುಗಿ ನುಜ್ಜಾಗುವ ಗಳಿಗೆ

ಬರುವ ಮೊದಲೇ ಹಿಂಜೋಲ ಬಿಟ್ಟು ಕರಗಿ ಹೋದವನೆ, 

ಇಕರಸನೆ, ಮಗನೇ...

ನೀನಿದ್ದದ್ದನ್ನು, ಹಾಗೇ ನೀನು ಸತ್ತು ಹೋದದ್ದನ್ನು, ಮರೆತು 

ಯಾವೊತ್ತಿನ ಹಾಗೆ ಇವೊತ್ತಿಗೂ ಪರಿಭ್ರಮಿಸುವುದು ಜಗತ್ತು- 

ಅದೋ, ಅಲ್ಲಿ, ಗಿಡಕ್ಕೆ ಕಟ್ಟಿದ ಕುದುರೆ ತೊಗಟಿಗೆ 

ತನ್ನ ಅಂಡುಜ್ಜಿ ಕೆನೆಯುವುದು. ಕಡಲ ಹಿನ್ನೀರ ಮಗ್ಗುಲಿಗೆ 

ಎಂದಿನ ಹಾಗೆ ಮಕ್ಕಳ ಕೇಕೆ.

ನೀರಿಗೆ ಬಿದ್ದ ನಿನ್ನ ಚೀತ್ಕಾರದ ಸದ್ದು 

ಕೇಳಿಯೂ ಕೇಳದ ಹಾಗೆ ತನ್ನ ಹೊಲವನ್ನುತ್ತು 

ಬೆವರನೊರೆಸಿಕೊಳ್ಳುವ ಅಳು.

ಒಬ್ಬೊಬ್ಬರಿಗು ಅವರದೇ ಆದ ಜರೂರು. 

ಅದೇ ರೀತಿ ನನಗೂ.


ಕೀಲುಕೊಟ್ಟಾಗ ಪ್ರಾಣ ಸಂಚಾರವಾಗುವ ಹಾಗೆ

ಮುಲುಗಾಡುವ ಮರದ ಆಟಿಕೆ ಮಾಡಿ,

ಅಥವಾ, ಕಾಗದದ ಚಿಟ್ಟೆ ಹಾರಾಡುವ ಹಾಗೆ ರೆಕ್ಕೆಗಳ ಹೂಡಿ

ದೊರೆಮಕ್ಕಳಿಗೆ ಕೊಟ್ಟು, ಅವರ ಜೊತೆಗಾಡಿ

ಹೊಟ್ಟೆ ಹೊರೆಯುವ ನಾನಿಲ್ಲಿ, ಈಗ.

ಆಗಾಗ, ನನ್ನ ಸುತ್ತಣ ಮಂಜ ಸೀಳಿ ಧುತ್ತನವತರಿಸಿ ಬಂದು 

ಕೈಗೆಟುಕುವಂತೆ ನಿಂತು

ಒಗಟು ಮಾತಾಡಿ

ಕಾಡುವ ಮಗನೇ,


ಹೇಳು, ಅಳಿದವನ ಮಾತು

ಉಳಿದವನ ಕರುಳಲ್ಲಿ ಅರಳುವುದು

ಹೀಗೆತಾನೇ ?



ಟಿಪ್ಪಣಿ: ೧. ತಂದೆ ಡೆಡಲಸ್‌ ಮಗ ಇಕ್ಕರಸ್ಸಿಗೆ ಮೇಣದ ರೆಕ್ಕೆ ಮಾಡಿಕೊಟ್ಟು ಎಚ್ಚರ ಹೇಳಿದ. ಅದನ್ನು ಉಲ್ಲಂಘಿಸಿದ ಹುಡುಗ ದುರಂತಕ್ಕೊಳಗಾದ. - ಗ್ರೀಕ್ ಪುರಾಣದಿಂದ.

೨. ೬೧-೬೬ ಸಾಲುಗಳು : ಆಡನ್ನಿನ Musee des Beaux Arts ಎನ್ನುವ ಕವನವನ್ನು ನೆನಪಿಗೆ

ತರುವಂತೆ.


ಡಿ.ಆರ್‌. ನಾಗರಾಜ ಕುರಿತು ಬಿ.ಸಿ. ರಾಮಚಂದ್ರ ಶರ್ಮ ರಚಿಸಿದ ಕವಿತೆ. ಈ ಕವಿತೆಯು ’ಕವಿ ಕಂಡ ಕವಿ’ ಸಂಕಲನದಲ್ಲಿ ಪ್ರಕಟವಾಗಿದೆ.

No comments: