Thursday, March 16, 2023

ಕವಿಗೆ ಕವಿ ಮಣಿವನ್ ೮: ರಾಮಾನುಜನ್ ಕವಿತೆ ಓದಿ



ಕುವೆಂಪು ಹಾಗೆ ಮಾತಾಡಬೇಕಾದರೆ

ತನ್ನ ಘನತೆಯಲ್ಲೇ ಅಪಾರ ನಂಬಿಕೆ ಬೇಕು.


ಬೇಂದ್ರೆಯಂತೆ ಹಾಡಬೇಕಾದರೆ

ಪರವಶನ ಆವೇಶ, ಧ್ಯಾನದ ತಂಪು ದರ್ಶನ ಕೂಡಿರಬೇಕು.


ಬಿರುನುಡಿ ಬೇಡುವುದನ್ನೂ ಮೆಲುನುಡಿಯಲ್ಲಿ 

ನರಸಿಂಹ ಸ್ವಾಮಿಗಳಂತೆ ಒಪ್ಪಿಸುವುದಕ್ಕೆ

ಬಾಸುಮತಿ ಅನ್ನ, ತಿಳಿಸಾರು, ಶಾವಿಗೆ ಖೀರು

ಬಣ್ಣಕಟ್ಟಿದ ಅಡಿಕೆ, ಚಿಗುರೆಲೆಗಳಲ್ಲಿ

ಅವು ದುರ್ಲಭವಾದ ಕಾಲದಲ್ಲೂ

ರುಚಿ ಉಳಿದಿರಬೇಕು,

ಬಾಡಿಗೆ ಮನೆಯ ತಾಪತ್ರಯಗಳು ಹೇಗೂ ಇರುತ್ತವೆ ಎಂದು ತಿಳಿದು 

ಪಬ್ಲಿಕ್ ಪಾರ್ಕಿನಲ್ಲಿ ಇನಿಯಳ ಜೊತೆ ಅಲೆದಾಡಿ ಬರಬೇಕು.


ಸದಾಚಾರದ ನಡುಮನೆಯಲ್ಲೇ ಮೋಕ್ಷವೂ ಇದೆ

ಎಂಬ ನಂಬಿಕೆ ಬೇಕು, ಪೂರ್ವಜರಿಂದ ಕೇಳಿಪಡೆದ ಈ ಶ್ರದ್ದೆ 

ತನಗೆ ನಿಜವಾಗುವುದಕ್ಕೆ ಬೇಕಾದಷ್ಟು ಕಾಲ

ಆದರದ ಸ್ವಂತ ಮನೆಯಲ್ಲಿ ಮಾಗಬೇಕು, ಹೀಗೆ ಹುಳಿಕಳೆದು ಮಧುರವಾಗಲು 

ಸಾವು ನೋವಿನ ಜೊತೆಗೆ ಮರಿಮಕ್ಕಳನ್ನು ಕಾಣಬೇಕು, ಅದಕ್ಕೆ ತ್ರಾಣಬೇಕು, 

ಬಹಳ, ಬಹಳ ಕಾಯಬೇಕು, ಮಾಸ್ತಿಯಂತೆ ನಿವೇದಿಸುವುದಕ್ಕೆ.


ಕಗ್ಗಂಟು ತೊಡೆಯಾದ ಭಾವ, ಆದರೆ ಉದ್ರೇಕ,

ಹುಬ್ಬು ಗಂಟಾದ ಬುದ್ದಿ, ಆದರೆ ಶ್ರದ್ಧೆ,

ಮಿತಿಗಳನ್ನು ಮೀರುವ ಆಸೆ, ಆದರೆ ಮಿತಿಯಲ್ಲಿರುವ ವ್ರತ,

ಒಳಗಿನ ತಳಮಳಕ್ಕೆ ಸಮುದ್ರದ ಭಾಷೆ ಕೃತಕವೆನ್ನಿಸದಂತೆ 

ಸಹಜವಾಗಿ ಸಿಗಬೇಕು, ಆಡಿದ್ದು ಆಗಬೇಕು,

ಅಡಿಗರಂತೆ ತುಡಿಯುವುದಕ್ಕೆ, ಕರಗದಂತೆ ನುಡಿಯುವುದಕ್ಕೆ.


ಹಿತವಾದ ಆಚಾರವಂತಿಕೆ, ಮೃದುವಾದ ಧ್ಯಾನಶೀಲತೆ 

ಅನುರಾಗದಲ್ಲಿ ನಂಬಿಕೆ, ಭಗವಂತನಲ್ಲಿ ಅರ್ಪಣಭಾವ 

ಬೇಕು, ಪುತಿನರ ಬಹುಶ್ರುತತ್ವದ ಭಕ್ತಿಗೆ.


ಆದರೆ ನಿಮ್ಮಂತೆ ಬರೆಯುವುದಕ್ಕೆ, ರಾಮಾನುಜನ್ 

ದೊಡ್ಡ ದನಿಯಲ್ಲಿ ಮಾತಾಡಲು ನಾಚಬೇಕು; 

ಆದರೆ ನಾಚದಂತೆ

ಹಾಗೆ ಮಾತಾಡಬಲ್ಲವರಲ್ಲಿ ಗೌರವ ಬೇಕು. 

ಪೋಲಿ ಹುಡುಗರು ಬೀದಿಯಲ್ಲಿ ಕಲಿಸಿದ ಭಾಷೆಯಲ್ಲಿ 

ಮಾತಾಡುವ ಲವಲವಿಕೆ ಬೇಕು;

ಮಾನ ಮರ್ಯಾದೆ ಬಿಟ್ಟ ಈ ಲವಲವಿಕೆಯಲ್ಲಿ 

ನಾಚುವ ಸತ್ಯ ಪಿಸುಗುಡುವ ಹುಂಬತನವಿರಬೇಕು; 

ತಲೆ ನೆರೆತ ಮೇಲೂ ಹುಡುಗಾಟಿಕೆ ಉಳಿದಿರಬೇಕು; 

-ಇಷ್ಟಕ್ಕೂ ಅದನ್ನು ಉಳಿಸಬಲ್ಲ ಗೆಳೆಯರೋ ಪ್ರೇಯಸಿಯರೋ

ಸದಾ ಇರಬೇಕು.


ಪ್ರಬುದ್ಧತೆ, ಹಸಿತನ, ಮಾತುಹಾರಿಸುವ ಕಿಲಾಡಿತನ 

ಕೋಡಂಗಿ ವೇಷದಲ್ಲಿ ಆವೇಶ ಮರೆಸುವ ಜಾಣತನ 

ಪ್ರೀತಿಗಾಗಿ, ಸೌಜನ್ಯಕ್ಕಾಗಿ, ಆರೋಗ್ಯಕ್ಕಾಗಿಯೂ 

ಹಲ್ಕ ಆಗಿಯೇ ಉಳಿದಿರುವ ಖದೀಮತನ 

ಬೇಕು-ನಿಮಗೆ ನಿಮ್ಮಂತೆ ಇದ್ದೇ ಬರೆಯುವುದಕ್ಕೆ.


ಶ್ರಮಪಟ್ಟು ಕಲಿತ ಇವೆಲ್ಲವೂ ಸಹಜವೆನ್ನಿಸುವಂತೆ 

ಘನತೆಯಿಲ್ಲದೆ ಘನವಾಗುವಂತೆ

ನಿಮ್ಮಂತೆ ಬರೆಯಲು, ರಾಮಾನುಜನ್

ಹಿತವಾಗಿ ನೋಯುವುದನ್ನೂ, ಅದರ ಆರ್ದ್ರತೆ ಉಳಿಸಿಕೊಂಡಿರುವುದನ್ನೂ

ಸತತ ಅಧ್ಯಯನದಲ್ಲಿ ಕಲಿತಿರಬೇಕು.


ಕಳ್ಳ ಕೊರಮ ಎನ್ನಿಸದಂತೆ

ಕೊರೆಯದಂತೆ

ಮಿರುಗಾಗಲೀ ಬುರುಗಾಗಲೀ ಇಲ್ಲದಂತೆ

ಸದ್ಯ ಎನ್ನಿಸುವಂತೆ

ಬರೆಯಲು ಕಲಿಸಿ, ಅಷ್ಟೇ ಸಾಕೆಂಬ ತೃಪ್ತಿ ಹುಟ್ಟಿ 

ಕ್ಷಿಪ್ರ ಸುಖದ ಹಲವರ ಅನಾಮಧೇಯ ಕಾವ್ಯಕ್ಕೂ 

ನೀವು ಕಾರಣವಾಗಿ ಬಿಟ್ಟಿರಿ, ಗುರುಗಳೆ 

ಛೇ, ಅದು ನಿಮ್ಮ ತಪ್ಪೆಂದು ಹೇಳಿದ್ದಲ್ಲ.


ನಿತ್ಯದ ಹೆಂಡತಿಯನ್ನು ನಿತ್ಯದಂತೆ ಪ್ರೀತಿಸುವಾಗ 

ಅವಸರ, ಆತಂಕ, ತೀವ್ರತೆ ಇಲ್ಲದ್ದರಿಂದಲೇ 

ಅರೆ ಬೆತ್ತಲೆಯಲ್ಲೂ

ಯಾವುದೋ ಅನಿರೀಕ್ಷಿತ ಕ್ಷಣ, ಅಪ್ರಯತ್ನವಾಗಿ 

ಅವನಿಗೆ ಇವಳು, ಇವಳಿಗೆ ಅವನು

ಒದಗಿ ಬಿಡುವ ಸೋಜಿಗದ ಸುಖದಂತೆ

ಇಡೀ ಪದ್ಯದ ಸುರತ ಪೂರ್ವ ಮುದ್ದಾಟದಲ್ಲಿ ಹಠಾತ್ತನೆ ಒದಗಿಬರುವ 

ನಿಮ್ಮ ತಿರುವುಗಳು;

ಅದೃಷ್ಟವಶಾತ್ ಎಂಬಂತೆ ನಿಮಗೆ

ಪತ್ತೆಯಾಗಿ ಬಿಡುವ ಮೈ ಮನಸ್ಸುಗಳ

ಸಂದಿ ಮೂಲೆಗಳು.


ಆದರೆ ನಿಮ್ಮಂತೆ ಸರಳವಾಗಿ ಸಹಜವಾಗಿ ಸತ್ಯವಾಗಿ

ನಾವು ಬರೆಯಬೇಕೆಂದರೆ ಗುರು

ನಿಮ್ಮಂತೆ ಬರೆಯಬಾರದು,

ಇರಬೇಕು.



ಯು.ಆರ್. ಅನಂತಮೂರ್ತಿ ಅವರು ಏ.ಕೆ. ರಾಮಾನುಜನ್‌ ಕುರಿತು ೧೫.೧.೯೨ರಂದು ರಚಿಸಿದ ಕವಿತೆ. ಅನಂತಮೂರ್ತಿ ಅವರ ಸಮಗ್ರ ಕವಿತೆಗಳ ಸಂಕಲನದಲ್ಲಿದೆ.




No comments: